ಮಂಗಳೂರು ಏ. 22 : ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿ ಕಳದೆ 12 ದಿನಗಳಿಂದ ನಡೆಯುತ್ತಿರುವ ಶಕ್ತಿ ಕ್ಯಾನ್ ಕ್ರಿಯೇಟ್ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವು ಇಂದು ನಡೆಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸೇವಾ ಭಾರತಿ ಕರ್ನಾಟಕ ದಕ್ಷಿಣದ ರಾಜ್ಯ ಕಾರ್ಯದರ್ಶಿ ಚೆನ್ನಯ್ಯ ಸ್ವಾಮಿಯವರು ಆಗಮಿಸಿದರು. ನಂತರ ಮಾತನಾಡಿದ ಅವರು ಶಕ್ತಿ ವಿದ್ಯಾ ಸಂಸ್ಥೆಯು ಭಾರತೀಯತೆಯ ಚಿಂತನೆಗೆ ಹೆಚ್ಚು ಒತ್ತು ಕೊಡುವುದರ ಮೂಲಕ ನಗರ ಪ್ರದೇಶದಲ್ಲಿ ಪಂಚಮುಖಿ ಶಿಕ್ಷಣದ ಗುರುಕುಲ ಪದ್ಧತಿಯ ಶಿಕ್ಷಣ ಕೊಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಡಾ. ಕೆ.ಸಿ ನಾಕ್‌ರು ಐದು ವರ್ಷಗಳ ಹಿಂದೆ ಇಂತಹ ಶಿಕ್ಷಣ ಕನಸು ಹೊತ್ತು ಶಾಲೆಯನ್ನು ಪ್ರಾರಂಭಿಸಿದ್ದಾರೆ ಅದು ಇಂದು ಸಾರ್ಥವಾಗಿದೆ. ಬೇರೆ ಬೇರೆ ಶಾಲೆಯಿಂದ ಬೇಸಿಗೆ ಶಿಬಿರಕ್ಕೆ ಬಂದಿರುವ ವಿದ್ಯಾರ್ಥಿಗಳ ಪ್ರತಿಭೆಯು ಇದನ್ನು ತೋರಿಸುತ್ತದೆ ಎಂದು ಅವರು ಹೇಳಿದರು. ಪೋಷಕರನ್ನು ಉದ್ದೇಶಿಸಿ ಮಾತನಾಡಿದ ಅವರು ಮಕ್ಕಳು ತಪ್ಪು ಮಾಡಿದಾಗ ಅದನ್ನು ನಗು ನಗುತ್ತಾ ಸರಿ ಪಡಿಸಬೇಕು. ನಾವು ಯಾವುದೇ ಕಾರಣಕ್ಕೂ ಮಕ್ಕಳ ಮುಂದೆ ತಪ್ಪನ್ನು ಮಾಡಬಾರದು ನಾವು ತಪ್ಪು ಮಾಡುವುದನ್ನು ಮಕ್ಕಳು ನೋಡಿದಾಗ ಅವರು ಸಹ ತಪ್ಪನ್ನು ಪದೇ ಪದೇ ಮಾಡುತ್ತಾರೆ. ಮಗುವನ್ನು ಅವರವರ ಬುದ್ಧಿಗೆ ಅನುಸಾರವಾಗಿ ಆಟವಾಡಲು ಬಿಡಬೇಕು. ಆಗ ಮಗು ಧೈರ್ಯದಿಂದ ಎಲ್ಲರನ್ನು ಎದುರಿಸಿ ಮುಂದೆ ಬರಲು ಸಾಧ್ಯವಿದೆ ಎಂದು ಅವರು ಕಿವಿ ಮಾತು ಹೇಳಿದರು. ನಾವು ಮಕ್ಕಳಿಗೆ ಶಿಸ್ತು, ಸಂಸ್ಕಾರ ಮುಂತಾದ ಒಳ್ಳೆಯ ಗುಣವನ್ನು ಕಲಿಸಿಕೊಡಬೇಕೆಂದು ಹೇಳಿದರು.
ವೇದಿಕೆ ಮೇಲೆ ಉಪಸ್ಥಿತರಿದ್ದ ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲರಾದ ಪೃಥ್ವಿರಾಜ್ ಮಾತನಾಡಿ ನಮ್ಮ ಶಿಕ್ಷಕರು ಮಗುವಿನಲ್ಲಿರುವ ಪ್ರತಿಭೆಯನ್ನು 12 ದಿನಗಳಲ್ಲಿ ಗುರುತಿಸುವ ಕೆಲಸ ಮಾಡಿರುವುದರಿಂದ ಇಂದು ಒಳ್ಳೆಯ ಪ್ರತಿಭಾ ಪ್ರದರ್ಶನವಾಗಿದೆ ಎಂದು ಹೇಳಿದರು. ನಮ್ಮ ಸಂಸ್ಥೆಯು 5 ವರ್ಷಗಳಿಂದ ಮಾಡಿದ ಶೈಕ್ಷಣಿಕ ಪ್ರಗತಿಯ ಕಾರಣ ನಾವು ಪಪೂ ಪರೀಕ್ಷೆಯಲ್ಲಿ ರಾಜ್ಯಕ್ಕೆ 5ನೇ ಸ್ಥಾನ ಮತ್ತು ಉತ್ತಮವಾಗಿರುವ 100% ಫಲಿತಾಂಶ ಪಡೆಯುವಲ್ಲಿ ಯಶಸ್ವಿಯಾದೆವು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ ಕೆ ಮಾತನಾಡಿ ನಾವು 5 ವರ್ಷಗಳಿಂದ ಇಂತಹ ಬೇಸಿಗೆ ಶಿಬಿರವನ್ನು ಆಯೋಜನೆ ಮಾಡಿಕೊಂಡು ಬರುತ್ತಿದ್ದೇವೆ. ಇದಕ್ಕೆಲ್ಲ ನಮ್ಮ ಶಿಕ್ಷಕ – ಶಿಕ್ಷಕೇತರ ಮಿತ್ರರು ಕಾರಣ ನಾವು ಸಂಸ್ಕಾರಯುತ ಶಿಕ್ಷಣ ಕೊಡುವುದರಲ್ಲಿ ಒಂದು ಹೆಜ್ಜೆ ಮುಂದು ಹೋಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಈ ವರ್ಷದಲ್ಲಿ ಆರಂಭಿಕ ಬುನಾದಿ ಶಿಕ್ಷಣದಲ್ಲಿ ಪ್ರಾರಂಭಿಸುತ್ತಿದ್ದೇವೆ. ಇಂದು ದ.ಕ ಜಿಲ್ಲೆಯಲ್ಲಿ ಮೊದಲ ಶಾಲೆಯಾಗಿ ಹೊರ ಹೊಮ್ಮಲಿದ್ದೇವೆ. ಇಂತಹ ಶಿಬಿರದ ಮೂಲಕ ಅನೇಕ ಪ್ರತಿಭೆಗಳನ್ನು ಗುರುತಿಸಲು ಸಾಧ್ಯವಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಉತ್ತಮವಾದ ಕಾರ್ಯವನ್ನು ಮಾಡುವುದರ ಮೂಲಕ ಶಕ್ತಿ ಶಿಕ್ಷಣ ಸಂಸ್ಥೆಯು ಭವಿಷ್ಯದಲ್ಲಿ ದೇಶದ ಪ್ರಗತಿಗೆ ಕಾರಣವಾಗಲಿದೆ ಎಂದು ಹೇಳಿದರು. ಶಿಬಿರದ ಕುರಿತಂತೆ ವಿದ್ಯಾರ್ಥಿಗಳಾದ ದೃಶ್ಯ ಸಾಲ್ಯಾನ್ ಮತ್ತು ಶ್ಲೋಕ್ ತಲಪಾಡಿ ಇವರು ಹಾಗೂ ಪೋಷಕರಾದ ರಚಮ, ವಂದನ ನಾಯಕ್ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ.ಸಿ ನಾೖಕ್, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಪ್ರಾಂಶುಪಾಲರಾದ ರವಿಶಂಕರ್ ಹೆಗಡೆ ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತವನ್ನು ದಿವ್ಯ ಯು. ಮತ್ತು ಧನ್ಯವಾದವನ್ನು ರೇಣುಕ ನಡೆಸಿಕೊಟ್ಟರು. ಭವ್ಯ ಅಮೀನ್ ನಿರೂಪಿಸಿದರು, ಕಾರ್ಯಕ್ರಮದ ಪ್ರಾರಂಭದಲ್ಲಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಶಿಕ್ಷಕಿ ಆನೆಟ್ ಅವರು 12 ದಿನದ ಶಿಬಿರದ ವರದಿ ವಾಚಿಸಿದರು.