ಶಕ್ತಿ ಶಾಲೆಯಲ್ಲಿ ಸ್ಕೌಟ್, ಗೈಡ್ಸ್ ಉದ್ಘಾಟನೆ
ಮಂಗಳೂರು ಅ. 19 : ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿ ಸ್ಕೌಟ್, ಗೈಡ್ಸ್ ಮತ್ತುಕಬ್ ಬುಲ್ ಬುಲ್‌ನ ಉದ್ಘಾಟನಾ ಕಾರ್ಯಕ್ರಮವು ಇಂದು ನಡೆಯಿತು. ಉದ್ಘಾಟನೆಯನ್ನು ಸಂಸ್ಥೆಯ ಸ್ಥಾಪಕರಾದ ಕೆ. ಸಿ. ನಾೖಕ್ ನೆರೆವೇರಿಸಿದರು. ಸ್ಕೌಟ್, ಗೈಡ್ಸ್ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಬೆಳೆಸಲು ಮತ್ತು ಬೆಳಗಿಸಲು ಉತ್ತಮ ವೇದಿಕೆಯಾಗಿದೆ. ಈ ಮೂಲಕ ಜೀವನದಲ್ಲಿ ಸ್ವಯಂ ಶಿಸ್ತು ಪರಸ್ಪರ ಹೊಂದಾಣಿಕೆ, ಸಹಕಾರ ಮನೋಭಾವವನ್ನು ಅಳವಡಿಸಲು ಸಾಧ್ಯವಿದೆ ಎಂದು ಶಕ್ತಿನಗರದ ಶಕ್ತಿ ವಸತಿ ಶಾಲೆಯಲ್ಲಿ ನಡೆದ ಸ್ಕೌಟ್, ಗೈಡ್ಸ್‌ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ದ.ಕ ಸ್ಕೌಟ್, ಗೈಡ್ಸ್‌ನ ಜಿಲ್ಲಾಧಿಕಾರಿ ಎಮ್.ಜಿ. ಖಜೆ ಹೇಳಿದರು. ವಿದ್ಯಾರ್ಥಿಗಳು ಸ್ಕೌಟ್, ಗೈಡ್ಸ್‌ನ ನಿಯಮ, ಪ್ರತಿಜ್ಞೆಗಳನ್ನು ಅರಿತು ತಮ್ಮ ಬದುಕಿನಲ್ಲೂ ಅದರ ತತ್ವವನ್ನು ಅಳವಡಿಸಬೇಕು. ಇದರಿಂದ ಸಂದರ್ಭ ಒದಗಿದಾಗ ಪ್ರೀತಿ, ಸೇವಾ ಮನೋಭಾವನೆಯನ್ನು ನಿಸ್ವಾರ್ಥವಾಗಿ ತೋರಿಸಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಮತ್ತೊರ್ವ ಮುಖ್ಯ ಅತಿಥಿ ಭಾರತ್ ಸ್ಕೌಟ್, ಗೈಡ್ಸ್‌ನ ಕಾರ್ಯದರ್ಶಿ, ರಾಮಶೇಷ ಶೆಟ್ಟಿ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣದ ಅಗತ್ಯವಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗಾಧಾರಿತ ಶಿಕ್ಷಣದ ತರಬೇತಿ ಸಿಗುತ್ತದೆಯೇ ಹೊರತು ಜೀವನದ ಮೌಲ್ಯದ ಪಾಠದ ಸಿಗುತ್ತಿಲ್ಲ ಅದನ್ನು ನೀಡುವ ಉದ್ದೇಶದಿಂದ ವಿದ್ಯಾರ್ಥಿಗಳಿಗೆ ಶಾಲೆಯ ಪ್ರಾಥಮಿಕ ಹಂತದಲ್ಲಿ ಸ್ಕೌಟ್, ಗೈಡ್ಸ್, ಬುಲ್‌ಬುಲ್ಸ್‌ಗಳು ಹಾಗೂ ಪದವಿ ಹಂತದಲ್ಲಿ ರೋವರ್‍ಸ್ ರೇಂಜರ್‍ಸ್‌ಗಳ ತರಬೇತಿಗಳಿವೆ ಎಂದರು.
ದ.ಕ.ಜಿಲ್ಲೆಯ ಸ್ಕೌಟ್ಸ್ ತರಬೇತಿದಾರ ಪ್ರತಿಮ್ ಕುಮಾರ್ ಅವರು ವಿದ್ಯಾರ್ಥಿಗಳು ಬದುಕಿನ ಪ್ರತಿಯೊಂದು ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿ ದೆಸೆಯಿಂದಲೇ ಕಲಿತುಕೊಳ್ಳಬೇಕು. ಅದರ ತರಬೇತಿಯನ್ನು ನೀಡುವುದೇ ಸ್ಕೌಟ್, ಗೈಡ್ಸ್‌ನ ಉದ್ದೇಶ. ಆದ್ದರಿಂದ ವಿದ್ಯಾರ್ಥಿಗಳು ಇದರ ಸದ್ಭಳಕೆಯನ್ನು ಮಾಡಿ ಹೆತ್ತವರು, ಶಾಲೆ, ದೇಶಕ್ಕೆ ಕೀರ್ತಿ ತರಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ಕೆ.ಸಿ. ನಾೖಕ್, ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ., ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ವಿದ್ಯಾಕಾಮತ್ ಜಿ., ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ ಉಪಸ್ಥಿತರಿದ್ದರು. ಅಧ್ಯಾಪಕಿ ಚಿತ್ರ ಸ್ವಾಗತಿಸಿದರು. ಪೂರ್ಣಿಮ ಶೆಟ್ಟಿ ನಿರೂಪಿಸಿದರು, ಭವ್ಯಶ್ರೀ ವಂದಿಸಿದರು.