ಶಕ್ತಿನಗರದಲ್ಲಿರುವ ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ರೇಷ್ಮ ಮೆಮೋರಿಯಲ್ ಸಭಾಂಗಣದಲ್ಲಿ ಗುರುಪೂರ್ಣಿಮದ ಪ್ರಯುಕ್ತ ಗುರು ವಂದನಾ ಕಾರ್ಯಕ್ರಮ ನಡೆಯಿತು.
ಗುರು ಪೂರ್ಣಿಮ ಪ್ರಯುಕ್ತ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಗುರು ಸಮಾನರಾದ ವಿದ್ಯಾಭಾರತಿ ಕರ್ನಾಟಕದ ಪ್ರಾಂತ ಕಾರ್ಯದರ್ಶಿಗಳು ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು, ಇದರ ನಿರ್ದೇಶಕರೂ ಅಗಿರುವ ಶ್ರೀಯುತ ವಸಂತ ಮಾಧವ್ ಅವರಿಗೆ ಶಕ್ತಿ ವಿದ್ಯಾ ಸಂಸ್ಥೆಯ ವತಿಯಿಂದ ಶಿಕ್ಷಕರೆಲ್ಲರೂ ಕೂಡಿಕೊಂಡು ಗುರುವಂದನೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಭಾರತೀಯ ಪರಂಪರೆಯಲ್ಲಿ ಗುರುವಿಗೆ ವಿಶೇಷ ಸ್ಥಾನ ನೀಡಲಾಗಿದೆ. ಗುರು ಎಂದರೆ ಒಬ್ಬ ವ್ಯಕ್ತಿ ಅಲ್ಲ, ಗುರು ಎಂದರೆ ಒಂದು ಶಕ್ತಿ. ಒಬ್ಬ ಗುರು ಪ್ರಕೃತಿಯಲ್ಲಿರುವ ಮರ, ಗಾಳಿ, ನದಿಯಂತೆ ನಿಸ್ವಾರ್ಥಿಯಾಗಿರುತ್ತಾನೆ. ಇಡೀ ಪ್ರಕೃತಿಯೇ ಒಂದು ಗುರುವಿದ್ದಂತೆ ಅದು ನಮಗೆ ಅರಿವು ಮತ್ತು ಜಾಗೃತಿಯನ್ನು ಕಲಿಸುತ್ತದೆ. ನಿಜವಾದ ಶಿಕ್ಷಣ ಎಂದರೆ ಒಬ್ಬ ವ್ಯಕ್ತಿಯ ಮನಸ್ಸಿನ ಒಳಗಿನ ಬೆಳಕನ್ನು ಹೊರಜಗತ್ತಿಗೆ ಪರಿಚಯಿಸುವುದೇ ಅಗಿದೆ. ಅಂತಹ ಶಿಕ್ಷಣವನ್ನು ಕಲಿಸಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಮಾಡುವಾತನೆ ಗುರುಎಂದು ಹೇಳುವ ಮೂಲಕ ವಿದ್ಯಾರ್ಥಿಗಳಿಗೆ ಗುರುಪೂರ್ಣಿಮದ ಮಹತ್ವವನ್ನು ತಿಳಿಸಿಕೊಟ್ಟರು.
ನಂತರ ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿದ ಶಕ್ತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ.ಸಿ ನಾಕ್ ಅವರು ಮಾತನಾಡಿ, ಶಿಕ್ಷಣವೇ ನಮ್ಮ ಜೀವನಕ್ಕೆ ಶ್ರೀ ರಕ್ಷೆ. ’ಗುರು ಪೂರ್ಣಿಮ’ ಒಂದು ವಿಶೇಷವಾದ ಕಾರ್ಯಕ್ರಮ. ಅಧ್ಯಾಪಕರನ್ನು ನಾವು ಗುರುಗಳೆಂದು ಸಂಬೋಧಿಸಬೇಕು. ಹಾಗೆಯೇ ಎಲ್ಲಾ ಶಿಕ್ಷಕರು ವಿದ್ಯೆಯನ್ನು ನೀಡುವುದು ಒಂದು ವೃತ್ತಿ ಅಂತ ಮಾತ್ರ ತಿಳಿಯದೆ ಅದೊಂದು ಪುಣ್ಯದ ಕೆಲಸ ಎಂದು ಭಾವಿಸಬೇಕು. ಸದೃಢ ದೇಶವನ್ನು ಕಟ್ಟುವವರೇ ಗುರುಗಳು. ಜೀವನದ ಪ್ರತಿಯೊಂದು ಹಂತದಲ್ಲಿಯೂ ಗುರು ಮಹತ್ವದ ಪಾತ್ರ ವಹಿಸುತ್ತಾನೆ. ಗುರುವಿಗೆ ವಿಶೇಷವಾದ ಮೌಲ್ಯವಿರುತ್ತದೆ. ಅದನ್ನು ಅರಿತು ನಡೆಯಬೇಕು. ಅದರಂತೆ ದೇಶ ಕಟ್ಟುವ ಕೆಲಸದಲ್ಲಿ ಹೆಚ್ಚಿನ ರೀತಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಗುರುಪೂರ್ಣಿಮ ಪ್ರಯುಕ್ತ ನಡೆದ ಈ ಗುರುವಂದನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೆಲ್ಲರೂ ಕೂಡಿಕೊಂಡು ಶಿಕ್ಷಕರ ಪಾದವನ್ನು ಮುಟ್ಟಿ ನಮಸ್ಕರಿಸುವ ಮೂಲಕ ಗುರು ವಂದನೆ ಅರ್ಪಿಸಿದರು.
ಈ ಕಾರ್ಯಕ್ರಮದಲ್ಲಿ ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್ ಕೆ. ಪ್ರಾಸ್ತಾವಿಕ ಭಾಷಣ ಮಾಡಿದರೆ, ಶಕ್ತಿ ವಸತಿ ಶಾಲಾ ಪ್ರಾಂಶುಪಾಲೆ ಶ್ರೀಮತಿ ಬಬಿತಾ ಸೂರಜ್ ಅವರು ಸ್ವಾಗತಿಸಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ. ಕೆ.ಸಿ ನಾಕ್ ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ ಕೆ. ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ ಮೂರ್ತಿ, ಶಕ್ತಿ ವಸತಿ ಶಾಲಾ ಪ್ರಾಂಶುಪಾಲೆ ಶ್ರೀಮತಿ ಬಬಿತಾ ಸೂರಜ್ ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಅಧ್ಯಾಪಕಿ ಶರಣಪ್ಪ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.