ಒಳ್ಳೆಯ ಪೌಷ್ಠಿಕ ಆಹಾರ ಸೇವನೆಯು ನಮ್ಮ ಉತ್ತಮ ಜೀವನ ಶೈಲಿಗೆ ಪೂರಕವಾಗಿದೆ. ಒಳ್ಳೆಯ ಆಹಾರದಿಂದ ಉತ್ತಮ ಆರೋಗ್ಯ ವೃದ್ಧಿಯಾಗಿ ಅನಾರೋಗ್ಯದಿಂದ ಬಿಡುಗಡೆ ಸಿಗುತ್ತದೆ. ಈ ಮೂಲಕ ಒಬ್ಬ ವ್ಯಕ್ತಿ, ಒಂದು ಮನೆ, ಒಂದು ಸಮಾಜ ಹಾಗೂ ಇಡೀ ದೇಶ ಆರೋಗ್ಯವಂತ ದೇಶವಾಗಿ ಇರಬೇಕು ಎನ್ನುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರು ಫಿಟ್ ಇಂಡಿಯಾ ಎನ್ನುವುದನ್ನು ಪರಿಚಯಿಸಿದರು ಎಂದು ಶಕ್ತಿ ನಗರದ ಶಕ್ತಿ ವಸತಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಣಿಪಾಲ ವಿ.ವಿ.ಯ ನಿವೃತ್ತ ಪ್ರಾಧ್ಯಾಪಕರಾದ ಡಾ. ಶಿವಾನಂದ್ ನಾಯಕ್ ಹೇಳಿದರು. ಉತ್ತಮ ಪೌಷ್ಠಿಕಾಂಶವುಳ್ಳ ಆಹಾರ ಸೇವನೆಯ ಜೊತೆಗೆ ಯೋಗ, ನಡಿಗೆ, ವ್ಯಾಯಾಮ ಅತ್ಯಗತ್ಯ. ಈ ರೀತಿ ಯೋಜಿತ ಆಹಾರ ಸೇವನೆಯಿಂದ ನಾವು ಕಾಯಿಲೆ ಹಾಗೂ ವೈದ್ಯರನ್ನು ನಮ್ಮ ಜೀವನದಿಂದ ದೂರ ಇರಿಸಬಹುದು ಎಂದರು. ಮಾಂಸಾಹಾರ ಸೇವಿಸುವವರು ವಾರಕ್ಕೊಮ್ಮೆ ಸೇವಿಸಬೇಕು ಮತ್ತು ನಮ್ಮ ಆಹಾರದಲ್ಲಿ ಸೊಪ್ಪು, ತರಕಾರಿ, ದ್ವಿದಳ ಧಾನ್ಯ, ಒಣಗಿದ ಹಣ್ಣುಗಳನ್ನು ಸೇವಿಸಬೇಕು.
ಮಕ್ಕಳಲ್ಲಿ ಒಳ್ಳೆಯ ಆಹಾರ ಪದ್ದತಿಯನ್ನು ಸೇವಿಸುವ ಅಭ್ಯಾಸವನ್ನು ನೀಡುವಲ್ಲಿ ಹೆತ್ತವರು ಮನೆ ಮತ್ತು ಶಿಕ್ಷಕರು ಶಾಲೆಯ ಪಾತ್ರ ಮುಖ್ಯ. ಮನೆಯಲ್ಲಿ ಇಂತಹ ಆಧುನಿಕ ಶೈಲಿಯ ಆಹಾರಗಳಿಗೆ ಮಿತಿಯನ್ನು ಹಾಕಬೇಕು. ಶಾಲೆಯಲ್ಲಿ ಶಿಕ್ಷಕರೂ ಮಕ್ಕಳಿಗೆ ಒಳ್ಳೆಯ ಆಹಾರ ಪದ್ದತಿಯ ಬಗ್ಗೆ ಮಾಹಿತಿಯನ್ನು ನೀಡಬೇಕು. ಮಕ್ಕಳಿಗೆ ಬಿಸ್ಕೆಟ್, ನೂಡಲ್ಸ್, ಬರ್ಗರ್, ಮೊದಲಾದ ಜಂಕ್ ಆಹಾರಗಳನ್ನು ಸೇವಿಸುವುದರಿಂದ ಆಗುವ ದುಷ್ಪರಿಣಾಮಗಳನ್ನು ತಿಳಿಹೇಳಬೇಕು.
ಉತ್ತಮ ಜೀವನ ಶೈಲಿಯ ಜೊತೆಗೆ ಒಳ್ಳೆಯ ಸಂಸ್ಕಾರಗಳನ್ನು ಹೆತ್ತವರು ಹಾಗೂ ಶಿಕ್ಷಕರು ನೀಡಬೇಕು. ಒಳ್ಳೆಯ ಪುಸ್ತಕವನ್ನು ಓದುವ ಅಭ್ಯಾಸ, ವ್ಯಾಯಾಮದ ಜೊತೆಗೆ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುವ ಅಭ್ಯಾಸವನ್ನು ಕಲಿಸಿಕೊಡಬೇಕು.
ಅತಿಯಾದ ಮಾತ್ರೆಗಳ ಸೇವನೆ, ಧೂಮಪಾನದ ಸೇವನೆಯಿಂದ ಲಿವರ್ನ ಮೇಲೆ ಹೇಗೆ ಪ್ರಭಾವ ಬೀರುತ್ತದೆಯೋ ಅದೇ ರೀತಿ ಜಂಕ್ ಆಹಾರಗಳೂ ಲಿವರ್ ಹಾಗೂ ಕಿಡ್ನಿಯ ಮೇಲೆ ಪ್ರಭಾವ ಬೀರುತ್ತದೆ.
ಬೆಳೆಯುವ ಮಕ್ಕಳು ಎಲ್ಲಾ ಬಗ್ಗೆಯ ಪೌಷ್ಠಿಕಾಂಶ ಆಹಾರವನ್ನು ಸೇವಿಸಬಹುದು. ಇದರಿಂದ ಉತ್ತಮ ದೈಹಿಕ ಬೆಳವಣಿಗೆ ಸಾಧ್ಯವಿದೆ. ಆದರೆ ವಯಸ್ಸಾದವರು ಯಾವುದೇ ಪೌಷ್ಠಿಕ ಆಹಾರವನ್ನು ಸೇವಿಸುವಾಗ ಮಿತವಾಗಿ ಸೇವಿಸಬೇಕು.
ಈ ರೀತಿಯಲ್ಲಿ ಆರೋಗ್ಯವಂತ ಆಹಾರ, ಆರೊಗ್ಯವಂತ ಪ್ರಜೆಗಳು ಹಾಗೂ ಆರೋಗ್ಯವಂತ ದೇಶವನ್ನು ಕಟ್ಟುವಲ್ಲಿ ಎಲ್ಲಾರೂ ಒಂದಾಗಿ ಕೈ ಜೋಡಿಸೋಣ ಎಂದರು.
ಕೊನೆಯಲ್ಲಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಸೂಕ್ತವಾಗಿ ಉತ್ತರಿಸುವುದರ ಮೂಲಕ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸಿಕೊಟ್ಟರು.
ಕಾರ್ಯಕ್ರಮದ ವಂದನಾರ್ಪಣೆ ಗೈದ ಶಕ್ತಿ ಶಾಲೆಯ ಪ್ರಾಂಶುಪಾಲರಾದ ವಿದ್ಯಾಕಾಮತ್ ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನಮ್ಮ ತೋಟದಲ್ಲಿ ನಾವೇ ಬೆಳೆಸಿದ ಸೊಪ್ಪು, ತರಕಾರಿಗಳಿಂದಲೇ ಮಾಡಿದ ಉತ್ತಮ ಆಹಾರವನ್ನು ನೀಡುತ್ತಿದ್ದೇವೆ ಎಂದು ಹೇಳಿದರು.
ಹಾಸ್ಟೆಲ್ನಲ್ಲಿರುವ ವಿದ್ಯಾರ್ಥಿಗಳಿಗೆ ಹಣ್ಣು, ತರಕಾರಿಗಳ ಸಲಾಡ್, ಒಣಗಿದ ಹಣ್ಣುಗಳನ್ನು ನೀಡುವುದರ ಜೊತೆಗೆ ದೈಹಿಕ ವ್ಯಾಯಾಮಗಳಿಗೂ ಪ್ರಾಧಾನ್ಯತೆ ನೀಡಲಾಗುತ್ತಿದೆ.
ಈ ಮೂಲಕ ನಮ್ಮ ಶಾಲೆಯ ಆರೋಗ್ಯವಂತ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಕೊಡುವಲ್ಲಿ ಪ್ರಯತ್ನಿಸುತ್ತಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಶಕ್ತಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರಾದ ಶ್ರೀ ಕೆ. ಸಿ. ನಾೖಕ್, ಶಾಲಾ ಪ್ರಾಚಾರ್ಯೆ ವಿದ್ಯಾ ಕಾಮತ್ ಜಿ, ಶಕ್ತಿ ಎಜ್ಯುಕೇಶನ್ ಟ್ರಸ್ಟ್ನ ಪ್ರಧಾನ ಸಲಹೆಗಾರ ರಮೇಶ್ ಕೆ, ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ಪಿ.ಯು ಕಾಲೇಜಿನ ಪ್ರಾಚಾರ್ಯ ಪ್ರಭಾಕರ ಜಿ.ಎಸ್, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿ ಸ್ವಾತಿ ನಡೆಸಿಕೊಟ್ಟರು.