ಪಾಠದ ಜೊತೆ ಪಠ್ಯೇತರ ಚಟುವಟಿಕೆಗಳ ಮೂಲಕ ಕ್ರೀಡೆಗೆ ಉತ್ತೇಜನ ಕೊಟ್ಟಾಗ ಮಾತ್ರ ಮಗುವಿನ ಸರ್ವಾಂಗೀಣ ಬೆಳವಣಿಗೆ ಸಾಧ್ಯ – ಪ್ರಹ್ಲಾದ್ ಶೆಟ್ಟಿ
ಮಂಗಳೂರು ನ. 25 : ಶಕ್ತಿನಗರದ ಶಕ್ತಿ ಪೂರ್ವ ಪ್ರಾಥಮಿಕ ಶಾಲೆ ಮತ್ತು ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಥಮಿಕ ವಿಭಾಗದ ವಾರ್ಷಿಕ ಕ್ರೀಡೋತ್ಸವವನ್ನು ಮಾಣಿಯ ಬಾಲ ವಿಕಾಶ ಆಂಗ್ಲ ಮಾಧ್ಯಮ ಶಾಲೆಯ ಸಂಸ್ಥಾಪಕರಾದ ಶ್ರೀ ಪ್ರಹ್ಲಾದ್ ಶೆಟ್ಟಿಯವರು ಪಾರಿವಾಳವನ್ನು ಬಾನೆತ್ತರಕ್ಕೆ ಹಾರಲು ಬಿಡುವುದರ ಮೂಲಕ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಸುಮಾರು 30 ವರ್ಷಗಳ ಕಾಲ ತಾನು ದೈಹಿಕ ಶಿಕ್ಷಣ ಶಿಕ್ಷಕರಾಗಿ ವಿದ್ಯಾರ್ಥಿಗಳಿಗೆ ಕ್ರೀಡಾ ಕ್ಷೇತ್ರದಲ್ಲಿ ಮಾರ್ಗದರ್ಶನದ ಕುರಿತಂತೆ ಮಾತನಾಡಿದರು. ಪ್ರತಿಯೊಬ್ಬ ಮಗುವಿಗೂ ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳ ಮೂಲಕ ಕ್ರೀಡೆಗೆ ಉತ್ತೇಜನ ನೀಡಿದರೆ ಮಾತ್ರ ಅವನ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ನಾವು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢವಾಗಿರಲು ಕ್ರೀಡೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ನೆರೆದಿರುವ ಪೋಷಕರು ಈ ನಿಟ್ಟಿನಲ್ಲಿ ಮಗುವಿಗೆ ಹೆಚ್ಚಿನ ಉತ್ತೇಜನ ನೀಡಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ. ಮಾತನಾಡಿ ಶಕ್ತಿ ವಿದ್ಯಾ ಸಂಸ್ಥೆಯು ಪ್ರಾರಂಭವಾದ ದಿನದಿಂದಲೂ ಕ್ರೀಡೆಗೆ ಉತ್ತೇಜನ ನೀಡಿದರ ಪರಿಣಾಮ ಇಂದು ಎಲ್.ಕೆ.ಜಿ ಯ ಮಗು ಸ್ವಿಮ್ಮಿಂಗ್ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವುದು ಹಾಗೂ ಶಕ್ತಿ ರೆಸಿಡೆನ್ಶಿಯಲ್ ಶಾಲೆ ಮತ್ತು ಪದವಿ ಪೂರ್ವ ಮಕ್ಕಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವುದು ಶಕ್ತಿ ಶಿಕ್ಷಣ ಸಂಸ್ಥೆ ಕ್ರೀಡೆಗೆ ಕೊಡುತ್ತಿರುವ ಉತ್ತೇಜನವೇ ಕಾರಣ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನವನ್ನು ಮಾಡಿ ಕ್ರೀಡಾ ಶಿಸ್ತನ್ನು ಪ್ರದರ್ಶಿಸಿದರು. ಈ ಕಾರ್ಯಕ್ರಮದ ವೇದಿಕೆಯಲ್ಲಿ ಶಕ್ತಿ ರೆಸಿಡೆನ್ಸಿಯಲ್ ಶಾಲೆ ಪ್ರಾಂಶುಪಾಲರಾದ ರವಿಶಂಕರ ಹೆಗಡೆ, ಶಕ್ತಿ ಪೂರ್ವ ಪ್ರಾಥಮಿಕ ಶಾಲೆ ಸಂಯೋಜಕಿ ಪೆಟ್ರೀಷಿಯ ಪಿಂಟೋ ಉಪಸ್ಥಿತರಿದ್ದರು. ಸ್ವಾಗತವನ್ನು ಅಧ್ಯಾಪಕರಾದ ಪ್ರಜೇತರವರು ಮತ್ತು ಧನ್ಯವಾದವನ್ನು ನಾದಶ್ರೀಯವರು ಹಾಗೂ ಡೊನಿಕ ನಿರೂಪಿಸಿದರು.