ಮಂಗಳೂರು : ಶಕ್ತಿ ನಗರದಲ್ಲಿರುವ ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ರೇಷ್ಮ ಮೆಮೋರಿಯಲ್ ಸಭಾಂಗಣದಲ್ಲಿ ”ಶಕ್ತಿ ಕ್ಯಾನ್ ಕ್ರಿಯೇಟ್’ ಬೇಸಿಗೆ ಶಿಬಿರವು 10-04-2023 ರಂದು ಉದ್ಘಾಟನೆಗೊಂಡಿತು.
ವಿದ್ಯಾಭಾರತಿಯ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಬೇಸಿಗೆ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ನಿಕಟ ಪೂರ್ವ ಸದಸ್ಯರಾದ ಶ್ರೀ ಅರುಣ್ ಜಿ. ಶೇಠ್ ಅವರು ದೀಪ ಬೆಳಗಿಸಿ ಸಮಾರಂಭವನ್ನು ಉದ್ಘಾಟನೆ ಮಾಡಿದರು. ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ವೈವಿಧ್ಯತೆಗಳಿಂದ ಕೂಡಿದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿ ಹಮ್ಮಿಕೊಂಡಿರುವ ಈ ಬೇಸಿಗೆ ಶಿಬಿರವು ಮಕ್ಕಳಿಗೆ ಪಠ್ಯಕ್ರಮದ ಹೊರತಾಗಿ ಜೀವನ ಮೌಲ್ಯಗಳನ್ನು, ಕೌಶಲ್ಯಗಳನ್ನು ಕಲಿಸುತ್ತದೆ.
ಶಿಕ್ಷಣವು ಮನುಷ್ಯನನ್ನು ನಾಗರಿಕನನ್ನಾಗಿ ರೂಪಿಸಬೇಕು. ಮನುಷ್ಯ ಲಾಲಸೆಗಳಿಗೆ ಬಲಿಯಾಗಿ ಜೀವನವನ್ನು ಕಳೆದುಕೊಳ್ಳಬಾರದು. ಅವನ ಜೀವನ ಸುಂದರವಾಗಿ ರೂಪುಗೊಳ್ಳಲು ಶಿಕ್ಷಣ ಶಕ್ತಿಯುತವಾಗಿರಬೇಕು. ಶಿಕ್ಷಣದ ಜೊತೆಗೆ ಸಾಮಾನ್ಯ ಜ್ಞಾನ ಸಿಗುವ ಮೌಲ್ಯಾಧಾರಿತ ಶಿಕ್ಷಣವು ಮಕ್ಕಳಿಗೆ ಸಿಗಬೇಕು. ಒಂದು ಕಲ್ಲು ಶಿಲೆಯಾಗಿ ಕಂಗೊಳಿಸುವಂತೆ, ಒಬ್ಬ ಅನಕ್ಷರಸ್ಥ ಉತ್ತಮ ನಾಗರಿಕನಾಗಬೇಕಾದರೆ ಶಿಕ್ಷಣ ಇರಬೇಕು. ಮಕ್ಕಳು ಜೀವನ ಮೌಲ್ಯ ಕೌಶಲಗಳನ್ನು ಮತ್ತು ವ್ಯಕ್ತಿತ್ವವನ್ನು ಈ ಬೇಸಿಗೆ ಶಿಬಿರದಿಂದ ಕಲಿಯುತ್ತಾರೆ ಎಂದು ಹೇಳಿ ಶಿಬಿರವು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದ ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪೃಥ್ವಿರಾಜ್ ಅವರು ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಶಾಲೆಗಳಲ್ಲಿ ಆಗ್ರಗಣ್ಯವೆಂದರೆ ನಮ್ಮ ಶಕ್ತಿ ರೆಸಿಡೆನ್ಯಿಯಲ್ ಶಾಲೆ. ಈಗಾಗಲೇ 100 ಕ್ಕೂ ಹೆಚ್ಚು ದಾಖಲಾತಿಗಳನ್ನು ಮುಂದಿನ 2023-24 ನೇ ಸಾಲಿಗೆ ಪಡೆದುಕೊಂಡು ಅಭಿವೃದ್ದಿ ಪಥದತ್ತ ಸಾಗುತ್ತಿದೆ. ಬೇಸಿಗೆ ಶಿಬಿರದ ಜೊತೆ ಸ್ವಿಮ್ಮಿಂಗ್ ಕ್ಯಾಂಪ್ ಕೂಡ ಆರಂಭವಾಗಿದ್ದು ಉತ್ತಮ ಪ್ರತಿಕ್ರಿಯೆ ಬರುತ್ತಿದ್ದು ಮಕ್ಕಳೆಲ್ಲರೂ ಸ್ವಿಮ್ಮಿಂಗ್ ಕ್ಯಾಂಪ್ನ ಉಪಯೋಗವನ್ನು ಪಡೆದುಕೊಳ್ಳುವಂತಾಗಲಿ. ಶಕ್ತಿ ಕ್ಯಾನ್ ಕ್ರಿಯೇಟ್ ಎಂಬ ಶೀರ್ಷಿಕೆಯಂತೆ ಮಕ್ಕಳೆಲ್ಲರೂ ಸಾಕಷ್ಟು ಕೌಶಲಗಳನ್ನು ಈ ಶಿಬಿರದಿಂದ ಕಲಿತು ಶಿಬಿರದ ಕೊನೆಯ ದಿನ ವೇದಿಕೆಯ ಮೇಲೆ ಪ್ರದರ್ಶಿಸುತ್ತಾರೆ ಎಂದು ತಿಳಿಸಿದರು.
ಈ ಬೇಸಿಗೆ ಶಿಬಿರವು ವರ್ಷದಿಂದ ವರ್ಷಕ್ಕೆ ಉತ್ತಮವಾಗಿ ಮೂಡಿ ಬರುತ್ತದೆ. ಎಲ್ಲಾ ಪೋಷಕರ ಸಹಕಾರದೊಂದಿಗೆ ಸಾಕಾರಗೊಳ್ಳುತ್ತಿದೆ. ಈ ಶಿಬಿರದಿಂದ ಮಕ್ಕಳೆಲ್ಲರೂ ಉತ್ತಮವಾದುದ್ದನ್ನು ಕಲಿಯುತ್ತಾರೆ. ಈ ಉದ್ದೇಶದ ಈಡೇರಿಕೆಗಾಗಿ ಶಕ್ತಿ ವಿದ್ಯಾ ಸಂಸ್ಥೆಯು ಸಕಲ ಸೌಲಭ್ಯವನ್ನು ಒದಗಿಸುತ್ತದೆ ಎಂದು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶಕ್ತಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಯಾದ ಡಾ.ಕೆ.ಸಿ.ನಾೖಕ್ ಅವರು ಆಗಮಿಸಿದ ಸರ್ವರಿಗೂ ಶುಭ ಹಾರೈಸಿದರು.
ಈ ಸಮಾರಂಭದಲ್ಲಿ ಶಕ್ತಿ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ.ಕೆ.ಸಿ.ನಾೖಕ್, ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪೃಥ್ವಿರಾಜ್, ಶಕ್ತಿ ರೆಸಿಡೆನ್ಯಿಯಲ್ ಶಾಲೆಯ ಪ್ರಾಂಶುಪಾಲರಾದ ರವಿಶಂಕರ್ ಹೆಗಡೆ, ಶಕ್ತಿ ಪೂರ್ವ ಪ್ರಾಥಮಿಕ ಶಾಲೆಯ ಸಂಯೋಜಕಿ ಪೆಟ್ರಿಷಿಯಾ ಪಿಂಟೋ, ಪೋಷಕರು, ಶಿಕ್ಷಕರು-ಶಿಕ್ಷಕೇತರ ಸಿಬ್ಬಂದಿಗಳು ಮತ್ತು ಮಕ್ಕಳು ಉಪಸ್ಥಿತರಿದ್ದರು.
ಶಕ್ತಿ ರೆಸಿಡೆನ್ಯಿಯಲ್ ಶಾಲೆಯ ಪ್ರಾಂಶುಪಾಲರಾದ ರವಿಶಂಕರ್ ಹೆಗಡೆ ಅವರು ಅತಿಥಿ ಪರಿಚಯವನ್ನು ಮಾಡಿದರು ಹಾಗೂ ಸಮಾಜ ಶಿಕ್ಷಕಿ ಸ್ಮಿಶಾ ಶಿಬಿರದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಜ್ಞಾನ ಅಧ್ಯಾಪಕಿ ಪ್ರಿಯಾಂಕ ಸರ್ವರನ್ನು ಸ್ವಾಗತಿಸಿ, ನಾದಶ್ರೀ ಧನ್ಯವಾದ ಸಲ್ಲಿಸಿದರು. ಕುಮಾರಿ ಚೈತ್ರಾ ಭಂಡಾರಿ ಅವರು ಸಮಾರಂಭವನ್ನು ನಿರೂಪಿಸಿದರು.