ಶಕ್ತಿ ವಸತಿ ಶಾಲೆ ಮತ್ತು ಈಶ ಫೌಂಡೇಶನ್ ಅವರ ಸಹಭಾಗಿತ್ವದೊಂದಿಗೆ ನಮ್ಮ ಮಣ್ಣನ್ನು ಉಳಿಸಿ ಎಂಬ ವಿಶೇಷ ಜಾಗೃತಿ ಕಾರ್ಯಕ್ರಮವು ಶುಕ್ರವಾರದಂದು ಶಕ್ತಿ ವಸತಿ ಶಾಲೆಯ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ನೆರವೇರಿತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ವಿದ್ಯಾ ಕಾಮತ್ ಜಿ. ಅವರು ಮಾತನಾಡಿ ಮಣ್ಣನ್ನು ಮಾನವ ಜನಾಂಗ ಹಲವಾರು ಕಾರಣಗಳಿಂದಾಗಿ ಹಾಳು ಮಾಡುತ್ತಿದೆ. ಪ್ಲಾಸ್ಟಿಕ್ ನಂತಹ ತ್ಯಾಜ್ಯಗಳನ್ನು ಮಣ್ಣಿನಲ್ಲಿ ಬಿಸಾಡಿ ಮಣ್ಣಿನ ಫಲವತ್ತತೆಯನ್ನು ನಾಶ ಮಾಡುತ್ತಿದ್ದೇವೆ. ಹೀಗಾದರೆ ಮುಂದಿನ ತಲೆಮಾರುಗಳಿಗೆ ಆರೋಗ್ಯಕರವಾದ ಆಹಾರ ಪದಾರ್ಥಗಳು ಸಿಗದೆ ಹಸಿವೆಯಿಂದ ಸಾಯಬೇಕಾಗುತ್ತದೆ. ಈಶ ಫೌಂಡೇಶನ್ ಅವರು ಮಣ್ಣಿನ ಸಂರಕ್ಷಣೆಯ ಬಗ್ಗೆ ಉತ್ತಮ ಕಾರ್ಯವನ್ನು ಮಾಡುತ್ತಿದ್ದಾರೆ. ಅವರ ಈ ಕಾರ್ಯಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
ಈಶ ಫೌಂಡೇಶನ್ ಸದಸ್ಯರಾದ ಪ್ರವೀಣ್ ಮತ್ತು ಅವರ ತಂಡವು ಮಣ್ಣಿನ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು. ನಂತರ ಮಾತನಾಡಿದ ಅವರು ಉತ್ತಮ ಆರೋಗ್ಯಕ್ಕಾಗಿ ಉತ್ತಮ ಆಹಾರ ಪದಾರ್ಥಗಳು ಬೇಕು. ಉತ್ತಮ ಆಹಾರ ಪದಾರ್ಥಗಳು ಉತ್ತಮ ಮಣ್ಣಿನ ಫಲವತ್ತತೆಯಿಂದ ಬರುತ್ತದೆ. ಆದ್ದರಿಂದ ನಾವು ಮಣ್ಣಿನ ಫಲವತ್ತತೆಯನ್ನು ರಕ್ಷಿಸಬೇಕಾದರೆ ರಾಸಾಯನಿಕ ಗೊಬ್ಬರಗಳನ್ನು ಬಳಸಬಾರದು, ನೈಸರ್ಗಿಕ ಮತ್ತು ಜೈವಿಕ ಗೊಬ್ಬರವನ್ನು ಬಳಸಬೇಕು. ಎಂದು ಜಾಗೃತಿ ಮೂಡಿಸಿದರು.
ಶಕ್ತಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿರುವ ಬೇಸಿಗೆ ಶಿಬಿರದ ಕೊನೆಯ ದಿನವಾದ ಶುಕ್ರವಾರದಂದು ಶಿಬಿರದ ಮಕ್ಕಳಿಗೆ ಮಣ್ಣಿನ ರಕ್ಷಣೆಯ ಕುರಿತು ವೀಡಿಯೋಗಳನ್ನು ತೋರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಕ್ತಿ ವಸತಿ ಶಾಲೆಯ ಅಧ್ಯಾಪಕ ವೃಂದದವರು, ವಿದ್ಯಾರ್ಥಿಗಳು ಮತ್ತು ಈಶ ಫೌಂಡೇಶನ್ ಸದಸ್ಯರು ಉಪಸ್ಥಿತರಿದ್ದರು. ಮಣ್ಣಿನ ಫಲವತ್ತತೆಯನ್ನು ರಕ್ಷಿಸುವ ಬಗ್ಗೆ ಒಂದು ಜಾಗೃತಿ ಗೀತೆಯನ್ನು ಹಾಡುವುದರ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.