ಮಂಗಳೂರಿನ ಶಕ್ತಿನಗರದ ಶಕ್ತಿ ವಸತಿ ಶಾಲೆಯ ಸರೋಶ್ ಈಜುಕೊಳದಲ್ಲಿ ಶಕ್ತಿ ವಿದ್ಯಾ ಸಂಸ್ಥೆ ಮತ್ತು ಮಂಗಳ ಸ್ವಿಮ್ಮಿಂಗ್ ಕ್ಲಬ್‌ನ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ 21 ದಿನಗಳ ಈಜು ತರಬೇತಿ ಶಿಬಿರವು ಇಂದು ಸಮಾರೋಪಗೊಂಡಿತು.
ಶಿಬಿರದ ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆಯಾದ ಶ್ರೀ ವಿದ್ಯಾ ಜಿ.ಕಾಮತ್ ಮಾತನಾಡಿ ಮಕ್ಕಳೆಲ್ಲರು ಉತ್ಸಾಹದಿಂದ ಈಜು ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು. ಕಲಿಕೆ ಅನ್ನುವುದು ನಿರಂತರ ಪ್ರಕ್ರಿಯೆಯಾಗಿರುತ್ತದೆ. ಈ ಸ್ವಿಮ್ಮಿಂಗ್ ಕ್ಯಾಂಪ್‌ನಿಂದ ಸಾಕಷ್ಟು ಅನುಭವಗಳನ್ನು ಮಕ್ಕಳು ಪಡೆದುಕೊಂಡಿದ್ದಾರೆ. ಈ ಮೂಲಕ ಮುಂಬರುವ ಅವಕಾಶಗಳನ್ನು ಬಳಸಿಕೊಂಡು ಮತ್ತಷ್ಟು ಹೆಸರುವಾಸಿಯಾಗಲಿ. ಮಕ್ಕಳು ಮತ್ತು ಪೋಷಕರ ಬೇಡಿಕೆಯ ಮೇರೆಗೆ ಈ ಶಿಬಿರವನ್ನು ಇನ್ನೂ ೧೫ ದಿನಗಳ ವರೆಗೆ ಮುಂದುವರಿಸುವುದಾಗಿ ಹೇಳಿದರು.
ತದನಂತರ ಶಿಬಿರಾರ್ಥಿಗಳಿಂದ ತಾವು ಕಲಿತ ಈಜು ಕಲೆಗಳ ಪ್ರದರ್ಶನ ನಡೆಯಿತು. ಮಕ್ಕಳೆಲ್ಲರು ಉತ್ಸಾಹದಿಂದ ಭಾಗವಹಿಸಿದರು. ಶಿಬಿರದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ, ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಶಕ್ತಿ ವಿದ್ಯಾ ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ವಸತಿ ಶಾಲೆಯ ಪ್ರಧಾನ ಲೆಕ್ಕ ಪರಿಶೋಧಕ ಅರುಣ್ ನಾಯಕ್, ಶಕ್ತಿ ವಸತಿ ಶಾಲೆಯ ಈಜು ತರಬೇತುದಾರ ಮತ್ತು ಶಿಬಿರದ ಸಂಯೋಜಕರಾದ ರಾಜೇಶ್ ಖಾರ್ವಿ, ಮಂಗಳ ಸ್ವಿಮ್ಮಿಂಗ್ ಕ್ಲಬ್‌ನ ಕಾರ್ಯದರ್ಶಿಗಳಾದ ಶಿವಾನಂದ ಗಟ್ಟಿ ಮತ್ತು ಸಂಪನ್ಮೂಲ ವ್ಯಕ್ತಿಗಳಾಗಿ ಭವಾನಿ ಜೋಗಿ, ಸಾನಿಯ ಶೆಟ್ಟಿ ಮತ್ತು ನಾಗರಾಜ್ ಖಾರ್ವಿ ಉಪಸ್ಥಿತರಿದ್ದರು. ಕನ್ನಡ ಅಧ್ಯಾಪಕರಾದ ಶರಣಪ್ಪ ನಿರೂಪಿಸಿ ವಂದಿಸಿದರು.