ದೈಹಿಕ ಆರೋಗ್ಯದ ಬಗ್ಗೆ ಗಮನ ವಹಿಸುವ ನಾವು ಯಾವುದೇ ರೋಗಗಳಿಗೆ ವೈದ್ಯರ ಸಲಹೆ ಪಡೆಯುತ್ತೇವೆ. ಅದೇ ರೀತಿ ಹಲ್ಲಿಗೆ ಸಂಬಂಧಿಸಿದ ನೋವುಗಳು ಉಲ್ಬಣಗೊಂಡಾಗ ಮಾತ್ರ ದಂತ ವೈದ್ಯರ ಬಳಿ ಹೋಗುತ್ತೇವೆ. ಇದು ನಾವು ಮಾಡುವ ಮೊದಲ ತಪ್ಪು. ದೇಹದ ಆರೋಗ್ಯ ಶುಚಿತ್ವಕ್ಕೆ ಮಹತ್ವ ಕೊಡುವ ನಾವು ದಂತ ಶುಚಿತ್ವಕ್ಕೂ ಮಹತ್ವ ಕೊಡಬೇಕು. ಪ್ರತೀ ಆರು ತಿಂಗಳಿಗೊಮ್ಮೆ ದಂತತಪಾಸಣೆಯನ್ನು ಮಾಡಿಸುವ ಮೂಲಕ ದಂತದ ಆರೋಗ್ಯವನ್ನು ಕಾಪಾಡಬೇಕು ಎಂದು ದಂತ ವೈದ್ಯೆ ಡಾ. ಸ್ವಾತಿ ಅಡಪ ಹೇಳಿದರು.
ಅವರು ಶಕ್ತಿ ನಗರದ ಶಕ್ತಿ ವಸತಿ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ದಂತ ತಪಾಸಣೆ ನಡೆಸಿ, ಮಕ್ಕಳಿಗೆ ಮಾಹಿತಿ ನೀಡಿ ಮಾತನಾಡಿದರು.
ದಿನಕ್ಕೆರಡು ಬಾರಿ ಹಲ್ಲುಗಳನ್ನು ಶುಚಿಯಾಗಿಡುವ ಅಭ್ಯಾಸವನ್ನು ಮಕ್ಕಳಿಗೆ ಕಲಿಸಿ ಕೊಡುವ ಮೂಲಕ ಮಕ್ಕಳಲ್ಲಿ ದಂತ ಶುಚಿತ್ವ, ದಂತ ಆರೋಗ್ಯದ ಬಗ್ಗೆ ಬಾಲ್ಯದಲ್ಲೇ ಅರಿವು ಮೂಡಿಸುವ ಪ್ರಯತ್ನವನ್ನು ಪೋಷಕರು ಮಾಡಬೇಕು ಎಂದ ಅವರು, ಯಾವ ರೀತಿ ಹಲ್ಲುಗಳನ್ನು ಶುಚಿಯಾಗಿಡಬೇಕು ಎನ್ನುವ ಕುರಿತು ಮಾಹಿತಿಯನ್ನು ನೀಡಿದರು.
ಕಾರ್ಯಾಗಾರದಲ್ಲಿ ಶಾಲೆಯ ಎಲ್ಲಾ ಮಕ್ಕಳಿಗೆ ಉಚಿತ ತಪಾಸಣೆ ನೀಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಈ ಸಂದರ್ಭ ಶಾಲಾ ಪ್ರಿನ್ಸಿಪಾಲ್ ವಿದ್ಯಾ ಕಾಮತ್ ಉಪಸ್ಥಿತರಿದ್ದರು.