ಜೂನ್ 07 : ಶಕ್ತಿ ರೆಸಿಡೆನ್ಸಿಯಲ್ ಶಾಲೆಯ 1 ರಿಂದ 7 ನೇ ತರಗತಿಯು ಇಂದಿನಿಂದ ಪ್ರಾರಂಭಗೊಂಡಿದೆ. ಶಾಲೆಯ ಆವರಣಕ್ಕೆ ವಿದ್ಯಾರ್ಥಿಗಳು ಬರುತ್ತಿದ್ದ ಹಾಗೆ ಅವರನ್ನು ಆರತಿ ಮಾಡಿ ತಿಲಕವಿಟ್ಟು ಸಂಸ್ಥೆಯ ಅಧ್ಯಾಪಕರು ಸ್ವಾಗತಿಸಿದರು. ಶಕ್ತಿ ಪಪೂ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ವಿಶೇಷವಾದ ಚೆಂಡೆ ವಾದನವನ್ನು ಮಾಡಿ ವಿದ್ಯಾರ್ಥಿಗಳನ್ನು ಹಾಗೂ ಅವರ ಪೋಷಕರನ್ನು ಬರಮಾಡಿಕೊಂಡರು. ಹೊಸ ವಿದ್ಯಾರ್ಥಿಗಳು ಹಾಗೂ ಹಿಂದಿನ ವಿದ್ಯಾರ್ಥಿಗಳು ಅವರ ಪೋಷಕರು ಶಾಲಾ ಪ್ರಾರ್ಥನೆಯಲ್ಲಿ ಭಾಗವಹಿಸಿ ಸಂಸ್ಥೆಯ ಶಿಸ್ತಿನ ಬಗ್ಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಸ್ಥೆಯ ಪ್ರಾಥಮಿಕ ಶಾಲೆಯ ಸಂಯೋಜಕಿ ಆನೇಟ್ ಅವರು ಸಂಸ್ಥೆಯ ಪಠ್ಯಕ್ರಮ ಹಾಗೂ ಇತರೆ ಶಿಸ್ತಿನ ಬಗ್ಗೆ ಮಾರ್ಗದರ್ಶನ ಮಾಡಿದರು.
ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲರಾದ ಪ್ರಥ್ವಿರಾಜ್ ಮಾತನಾಡಿ ಸಂಸ್ಥೆಯಲ್ಲಿ ಶಿಸ್ತು ಕಾಪಾಡುವುದು ಹಾಗೂ ಪ್ರತಿಯೊಬ್ಬ ವಿದ್ಯಾರ್ಥಿಯ ಸರ್ವಾಂಗೀಣ ಅಭಿವೃದ್ದಿಯ ಬಗ್ಗೆ ಮಾರ್ಗದರ್ಶನ ಮಾಡಿದರು. ಪೋಷಕರು ಸಂಸ್ಥೆಯ ಶಿಸ್ತಿನ ಜೊತೆ ಕೈ ಜೋಡಿಸುವಂತೆ ಕರೆ ನೀಡಿದರು. ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಕಾಳಜಿಯಿಂದ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಸಂಸ್ಥೆಯ ಕಾರ್ಯದರ್ಶಿ ಸಂಜೀತ್ ನಾೖಕ್ ಮಾತನಾಡಿ ನಾವು ಅಚ್ಚುಕಟ್ಟದ ಮೂಲಭೂತ ಸೌಕರ್ಯವನ್ನು ಒದಗಿಸಿದ್ದೇವೆ. ಇದನ್ನು ಚೆನ್ನಾಗಿ ಬಳಸಿಕೊಳ್ಳುವಂತೆ ಹೇಳಿದರು. ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ. ಮಾತನಾಡಿ ಸಂಸ್ಥೆಯ ಮೇಲೆ ಅಪಾರ ಗೌರವವನಿಟ್ಟು ವಿದ್ಯಾರ್ಥಿಗಳನ್ನು ದೊಡ್ಡ ಪ್ರಮಾಣದಲ್ಲಿ ಶಕ್ತಿ ವಿದ್ಯಾಸಂಸ್ಥೆಗೆ ಸೇರ್ಪಡೆ ಮಾಡಿರುವ ಪೋಷಕರ ಕುರಿತಂತೆ ಅಭಿಮಾನವನ್ನು ವ್ಯಕ್ತಪಡಿಸಿದರು. ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಒಳ್ಳೆಯ ಭವಿಷ್ಯವನ್ನು ರೂಪಿಸುವಂತಹ ಶಿಕ್ಷಣವನ್ನು ಶಿಸ್ತು ಸಂಸ್ಕಾರವನ್ನು ಇಲ್ಲಿ ನೀಡಲಾಗುವುದೆಂದು ಅವರು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಸಂಸ್ಥೆಯ ಆಡಳಿತಾಧಿಕಾರಿ ಡಾ.ಕೆ.ಸಿ.ನಾೖಕ್ ನಾನು ಮಂಗಳೂರಿನ ಉತ್ತಮ ಅದ್ಯಾಪಕರನ್ನು ನೇಮಕ ಮಾಡಿದ್ದೇನೆ. ಈ ಸಂಸ್ಥೆಯಲ್ಲಿ ಓದಿರುವ ಪ್ರತಿಯೊಬ್ಬ ವಿದ್ಯಾರ್ಥಿಯು ದೇಶದ ಸಂಪತ್ತು ಆಗಬೇಕು. ಆಗ ಮಾತ್ರ ನಾನು ಹಾಕಿರುವ ಪರಿಶ್ರಮಕ್ಕೆ ಬೆಲೆ ಸಿಗುತ್ತದೆ. ಇದನ್ನು ಕಾರ್‍ಯರೂಪಕ್ಕೆ ತರುವಲ್ಲಿ ನಿಮ್ಮೆಲ್ಲರ ಸಹಕಾರ ಅತೀ ಮುಖ್ಯವೆಂದು ಹೇಳಿದರು.
ಶಕ್ತಿ ರೆಸಿಡೆನ್ಸಿಯಲ್ ಶಾಲೆ ಪ್ರಾಂಶುಪಾಲರಾದ ರವಿಶಂಕರ್ ಹೆಗಡೆ ಮಾತನಾಡಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಸಂಸ್ಥೆಯ ಬೆಳವಣಿಗೆಗೆ ಪೂರಕವಾಗಿ ಸ್ಪಂದಿಸಬೇಕೆಂದು ಹೇಳಿದರು.
ವೇದಿಕೆಯಲ್ಲಿ ಆಡಳಿತ ಮಂಡಳಿ ಸದಸ್ಯೆ ಸಗುಣ ಸಿ. ನಾೖಕ್ ಉಪಸ್ಥಿತರಿದ್ದರು. ಕಾರ್‍ಯಕ್ರಮದ ಸ್ವಾಗತವನ್ನು ಚೇತನ ತಲಪಾಡಿರವರು ನೇರವೇರಿಸಿದರು. ನಿರೂಪಣೆಯನ್ನು ಪ್ರಿಯದರ್ಶಿನಿಯವರು, ವಂದಾರ್ಪಣೆಯನ್ನು ಭವ್ಯಶ್ರೀರವರು ನೇರವೇರಿಸಿದರು.