ಮಂಗಳೂರಿನ ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಶಕ್ತಿ ರೆಸಿಡೆನ್ಯಿಯಲ್ ಶಾಲೆ ಮತ್ತು ಶಕ್ತಿ ಪಪೂ ಕಾಲೇಜಿನ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಸಂಸ್ಥೆಯ ರೇಷ್ಮಾ ಮೆಮೋರಿಯಲ್ ಸಭಾಂಗಣದಲ್ಲಿ ನಡೆದ ಶಿಕ್ಷಕ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸರಕಾರಿ ಬಾಲಕಿಯರ ಪಪೂ ಕಾಲೇಜು ಕಾರ್ಸ್ಟ್ರೀಟ್, ಮಂಗಳೂರು ಇಲ್ಲಿಯ ನಿವೃತ್ತ ಉಪನ್ಯಾಸಕಿ ಶ್ರೀಮತಿ ರೇವತಿ ವಿ ಶೆಟ್ಟಿ ಅವರು ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಆರಂಭದಲ್ಲಿ ಶಕ್ತಿ ಸಂಸ್ಥೆಯ ಮುಖ್ಯ ಸಲಹೆಗಾರರಾದ ರಮೇಶ ಕೆ. ಅವರು ತಮ್ಮ ಪ್ರಸ್ತಾವಿಕ ನುಡಿಯಲ್ಲಿ ಪ್ರತಿ ವರ್ಷ ನಮ್ಮ ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಆಚರಿಸಿಕೊಂಡು ಬರುತ್ತಾ ಇದ್ದೇವೆ. ಸಮಾಜದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಗಾಧವಾದ ಸೇವೆಯನ್ನು ಸಲ್ಲಿಸಿ ನಿವೃತ್ತಗೊಂಡ ಶಿಕ್ಷಕರನ್ನು ಸನ್ಮಾನಿಸಿಕೊಂಡು ಬರುತ್ತಾ ಇದ್ದೇವೆ. ನಮ್ಮ ದೇಶವನ್ನು ರಾಜ್ಯವನ್ನು ಯಾರು ಮುನ್ನಡೆಸುತ್ತಿದ್ದಾರೋ ಅವರಿಗೆ ಪ್ರೇರಣೆ ಗುರುಗಳು. ಅಂತಹ ಗುರುಗಳನ್ನು ಸ್ಮರಿಸಿಕೊಂಡು ಗೌರವವನ್ನು ಸಮರ್ಪಿಸಬೇಕಾಗಿದೆ. ನಮ್ಮ ಸಮಾಜದಲ್ಲಿ ಎಷ್ಟು ಶಿಕ್ಷಕರು ನಿವೃತ್ತಿಯ ಬಳಿಕವು ಕೂಡ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗುರುಗಳಿಗೆ ಗೌರವ ತೋರುವುದು ನಮ್ಮ ದೇಶದ ಸಂಸ್ಕೃತಿ. ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಇಂತಹ ಕಾರ್ಯಕ್ರಮದ ಮೂಲಕ ಮಕ್ಕಳು ಪ್ರೇರಣದಾಯಿಯಾಗಿ ಭವಿಷ್ಯದಲ್ಲಿ ಸಮಾಜದಲ್ಲಿ ಸಹಾಯವಾಗುವಂತ ಕೆಲಸವನ್ನು ಮಾಡಿದಾಗ ತಾವು ಪಡೆದ ಶಿಕ್ಷಣಕ್ಕೆ ಅರ್ಥ ಬರುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಆಗಾಧವಾದ ಸೇವೆ ಸಲ್ಲಿಸಿ ನಿವೃತ್ತರಾದ ಶ್ರೀಮತಿ ರೇವತಿ ವಿ. ಶೆಟ್ಟಿ ಅವರಿಗೆ ಶಕ್ತಿ ವಿದ್ಯಾ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ನಂತರ ಮಾತನಾಡಿದ ಶ್ರೀಮತಿ ರೇವತಿ ವಿ. ಶೆಟ್ಟಿ ಅವರು ’ಶಕ್ತಿ ವಿದ್ಯಾ ಸಂಸ್ಥೆಗೆ ಆಗಮಿಸಿದ್ದು ನಾನು ವಿದ್ಯಾ ಮಾತೆಯ ಭವನಕ್ಕೆ ಬಂದಿದ್ದೇನೆ ಎಂದು ಭಾಸವಾಯಿತು. ಇಲ್ಲಿಯ ಮಕ್ಕಳು ಶಿಸ್ತಿಗೆ ಮಾದರಿಯಾಗಿದ್ದಾರೆ. ಇವತ್ತು ನನಗೆ ನೀಡಿದ ಸನ್ಮಾನ ಕೇವಲ ನನಗೆ ಮಾತ್ರ ಅಲ್ಲ ಇದು ಎಲ್ಲಾ ಶಿಕ್ಷಕರಿಗೂ ನೀಡಿದ ಸನ್ಮಾನ ಎಂದು ನಾನು ಭಾವಿಸುತ್ತೇನೆ. ಜಗತ್ತಿನ ಒಬ್ಬ ಶ್ರೇಷ್ಠ ಗುರು ರಾಧಾಕೃಷ್ಣನ್ ಅವರ ಹೆಸರಲ್ಲಿ ಶಿಕ್ಷಕರ ದಿನಾಚಾರಣೆಯನ್ನು ಪ್ರತಿವರ್ಷ ಆಚರಿಸುತ್ತಾ ಬರುತ್ತಾ ಇದ್ದೇವೆ. ಕಲ್ಲಿನಂತೆ ಕೂತುಕೊಳ್ಳಬೇಡಿ, ಗಡಿಯಾರದಂತೆ ಸದಾ ಕೆಲಸವನ್ನು ಮಾಡುತ್ತಾ ಇರಿ ಎಂಬ ಸಂದೇಶವನ್ನು ಅವರು ನಮಗೆ ನೀಡಿದ್ದಾರೆ. ಮನೆಯೆ ಮೊದಲ ಪಾಠ ಶಾಲೆ ತಾಯಿಯೇ ಮೊದಲ ಗುರು ಅಲ್ಲಿಂದ ನಾವು ಸಮಾಜದಲ್ಲಿ ಬೆಳೆದು ಸಾಧನೆ ಮಾಡುವ ತನಕ ನಮಗೆ ಒಳ್ಳೆಯದನ್ನು ಯಾರೆಲ್ಲ ಹೇಳಿಕೊಡುತ್ತಾರೋ ಅವರೆಲ್ಲರೂ ನಮ್ಮ್ಮ ಗುರುಗಳು ಅವರೆಲ್ಲರಿಗೂ ನಾವು ಗೌರವ ನೀಡಬೇಕು. ವಿದ್ಯಾರ್ಥಿಯಲ್ಲಿನ ಪ್ರತಿಭೆಯನ್ನು ಗುರುತಿಸಿ ಅ ಮೂಲಕ ವಿದ್ಯಾರ್ಥಿಯನ್ನು ದೇಶಕ್ಕೆ ಕೊಡುಗೆಯನ್ನಾಗಿ ನೀಡುವುದು ಶಿಕ್ಷಕರ ಕರ್ತವ್ಯವಾಗಬೇಕು. ವಿದ್ಯಾರ್ಥಿಗಳು ಬಾವಿಯೊಳಗಿನ ಖಾಲಿಯಾಗುವ ನೀರಿನ ಹಾಗೆ ಆಗದೆ ಬತ್ತದ ಸೆಲೆಯಾಗಬೇಕು. ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಶಿಕ್ಷಕರ ಜೊತೆಯಲ್ಲಿ ಪೋಷಕರು ಕೈ ಜೋಡಿಸಬೇಕಾಗಿದೆ. ಜೊತೆಗೆ ಸಮಾಜ ಸಹಕಾರ ನೀಡಬೇಕಾಗಿದೆ. ಶಿಕ್ಷಕರನ್ನು ನಾವು ಬಹಳ ಗೌರವದಿಂದ ಕಾಣಬೇಕಾಗಿದೆ. ಶ್ರದ್ಧೆಯಿಂದ ವಿದ್ಯಾರ್ಥಿಗಳು ಶಿಕ್ಷಕರ ಜೊತೆ ವರ್ತಿಸಬೇಕು. ವಿದ್ಯಾರ್ಥಿಗಳಿಗೆ ಶಿಸ್ತು, ವಿದ್ಯೆ ಕಲಿಸಿದ ಗುರುಗಳು ಪೂಜಿಸಲ್ಪಡುವ ವ್ಯಕ್ತಿತ್ವ ಉಳ್ಳವರು. ಪ್ರತಿಯೊಬ್ಬ ವ್ಯಕ್ತಿಯ ಹಿಂದೆ ಒಬ್ಬ ಗುರುವಿದ್ದೆ ಇರುತ್ತಾನೆ. ನಿಮ್ಮಲ್ಲಿ ಅಕ್ಷರದ ದೀಪವನ್ನು ಹಚ್ಚಿ ನಿಮ್ಮನ್ನು ಪೂರ್ಣತೆಯ ಕಡೆಗೆ ಕರೆದುಕೊಂಡು ಹೋಗುತ್ತಾರೆ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ ಎಂದು ದಾಸರು ಹಾಡಿದ್ದಾರೆ. ಶಿಕ್ಷಕ ತಂದೆಯಾಗಿ, ತಾಯಿಯಾಗಿ, ಸ್ನೇಹಿತನಾಗಿ, ಗುರುವಾಗಿ, ಆಪ್ತನಾಗಿ ಇಂದು ನಾನಾ ರೀತಿಯ ಪಾತ್ರಗಳನ್ನು ನಿಭಾಯಿಸುತ್ತಿದ್ದಾನೆ. ದಣಿವರಿಯದೆ ಕೆಲಸ ಎಂದರೆ ಅದುವೇ ಶಿಕ್ಷಕ ವೃತ್ತಿ. ಅಂತಹ ಶಿಕ್ಷಕರನ್ನು ನಾವು ಜೀವನ ಪೂರ್ತಿ ಅವರನ್ನು ಮರೆಯದೆ ಸ್ಮರಿಸಿಕೊಳ್ಳುತ್ತಾ ಇರೋಣ ಎಂದು ಹೇಳುತ್ತಾ ಮಾತಿಗೆ ವಿರಾಮ ನೀಡಿದರು.
ನಂತರ ಮಾತನಾಡಿದ ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರದೀಪ್ ಕುಮಾರ್ ಶೆಟ್ಟಿ ಅವರು ಈ ಕಲಿಯುಗದಲ್ಲಿ ಮಕ್ಕಳು ಶಿಕ್ಷಕರಿಗೆ ಆಗೌರವವನ್ನು ತೋರುವುದು ಸಾಮಾನ್ಯವಾಗಿದೆ ಇದು ಬದಲಾಗಬೇಕು. ಅಕ್ಷರ ಅನ್ನುವುದು ನಾಶವಿಲ್ಲದ್ದು ಅದನ್ನು ಕಲಿಸಿದವರು ಗುರು ಅಂತಹ ಗುರುಗಳನ್ನು ನಾವು ಮರೆಯಬಾರದು. ಪ್ರಪಂಚವನ್ನು ತೋರಿಸಿದ್ದು ಗುರುಗಳು, ಅಮ್ಮ ಎಂಬ ಎರಡಕ್ಷರದ ಪದವನ್ನು ಕಲಿಸಿದವರು ಗುರುಗಳು, ಕೊಟ್ಟಿದ್ದು ತನಗೆ ಬಚ್ಚಿಟ್ಟದ್ದು ಪರರಿಗೆ ಎಂಬ ಮಾತಿನಂತೆ ಅಂತಹ ಉದಾತ್ತ ಮನೋಭಾವ ನಮ್ಮ ಶಕ್ತಿ ವಿದ್ಯಾ ಸಂಸ್ಥೆಯ ಸಂಸ್ಥಾಪಕರಾದ ಡಾ ಕೆ ಸಿ ನಾಕ್ ಅವರದ್ದು. ಅವರು ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರನ್ನು ಕುಟುಂಬದ ಸದಸ್ಯರಂತೆ ಕಾಣುತ್ತಿದ್ದಾರೆ. ಶಿಕ್ಷಕರ ಕುಟುಂಬಕ್ಕೆ ನೆರವಾಗುವಂತಹ ಸಾಕಷ್ಟು ಯೋಜನೆಗಳನ್ನು ತಂದಿದ್ದಾರೆ. ನಾವೆಲ್ಲರೂ ಈ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಕ್ಕೆ ನಿಜಕ್ಕೂ ಧನ್ಯರು ಎಂದು ಹೇಳುತ್ತಾ ಮಾತಿಗೆ ವಿರಾಮ ನೀಡಿದರು.
ಶಿಕ್ಷಕರ ದಿನಾಚರಣೆಯ ನಿಮಿತ್ತ ಡಾ.ಕೆ. ಸಿ. ನಾೖಕ್ ಸಂಸ್ಥೆಯ 170 ಕ್ಕೂ ಹೆಚ್ಚಿನ ಉದ್ಯೋಗಿಗಳಿಗೆ ತಲಾ 30 ಲಕ್ಷ ರೂ.ವಿನ ಕುಟುಂಬ ಆರೋಗ್ಯ ವಿಮೆಯನ್ನು HDFC ಬ್ಯಾಂಕ್ನ ಸಹಯೋಗದೊಂದಿಗೆ ನಿವಾ ಬೂಪದಿಂದ ವಿತರಿಸಿದರು. ಇದಕ್ಕೆ ಸಂಬಂಧಿಸಿದ ಡಮ್ಮಿ ಚೆಕ್ನ್ನು HDFC ಕಾರ್ಕಳ ಬ್ಯಾಂಕ್ ವ್ಯವಸ್ಥಾಪಕರಾದ ಶ್ರೀ ಪ್ರಸಾದ್ ಪ್ರಭು ಡಾ.ಕೆ.ಸಿ.ನಾೖಕ್ರಿಗೆ ಹಸ್ತಾಂತರಿಸಿದರು. ಇದರಿಂದ ಶಕ್ತಿಯಲ್ಲಿ ಕೆಲಸವನ್ನು ಮಾಡುವ ಎಲ್ಲಾ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳ ಕುಟುಂಬ ಸದಸ್ಯರಿಗೆ ಈ ಆರೋಗ್ಯ ವಿಮೆಯಿಂದ ಅನುಕೂಲವಾಗಲಿದೆ. ಇದೇ ಸಂದರ್ಭದಲ್ಲಿ 5 ವರ್ಷಕ್ಕಿಂತ ಹೆಚ್ಚು ಕೆಲಸ ಮಾಡುತ್ತಿರುವ ಶಿಕ್ಷಕ-ಶಿಕ್ಷಕೇತರ ಉದ್ಯೋಗಿಗಳಿಗೆ ಪಿಂಚಣಿ ಪತ್ರವನ್ನು ವೇದಿಕೆಯಲ್ಲಿ ಡಾ.ಕೆ.ಸಿ.ನಾೖಕ್ ವಿತರಿಸಿದರು.
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದ ಡಾ.ಕೆ.ಸಿ.ನಾೖಕ್ ನಾನು ಶಾಲೆ ಮತ್ತು ಪಪೂ ಕಾಲೇಜು ಪ್ರಾರಂಭ ಮಾಡುವಾಗ ನನ್ನಿಂದ ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕೆಂಬ ಇಚ್ಚೆಯಿಂದ ಶಕ್ತಿ ವಿದ್ಯಾಸಂಸ್ಥೆಯನ್ನು ಪ್ರಾರಂಭ ಮಾಡಿರುವುದು. ವಿದ್ಯಾರ್ಥಿಗಳ ಸರ್ವಾಂಗಿಣ ಅಭಿವೃದ್ದಿ ಮೊದಲ ಗುರಿಯಾದರೆ ನಂತರದ ಗುರಿ ನನ್ನ ಸಂಸ್ಥೆಯ ಉದ್ಯೋಗಿಗಳ ಅಭಿವೃದ್ದಿ ಎಂದು ಹೇಳಿದರು. ನಾನು ನನ್ನ ಶಿಕ್ಷಕರು ಶಿಕ್ಷಕೇತರರು ನನ್ನ ಕುಟುಂಬದ ಸದಸ್ಯರು ಎಂದು ಭಾವಿಸಿದೇನೆ. ಅವರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ 30 ಲಕ್ಷದ ಆರೋಗ್ಯ ವಿಮೆಯನ್ನು ಹಾಗೂ ಪಿಂಚಣಿ ಸೌಲಭ್ಯವನ್ನು ಒದಗಿಸುವ ಭಾಗ್ಯ ನನಗೆ ಒದಗಿ ಬಂದಿದೆ. ನಮ್ಮ ಜೊತೆ ಈ ಎಲ್ಲಾ ಕುಟುಂಬಗಳು ಒಳ್ಳೆಯದಾಗಬೇಕು. ಈ ಎಲ್ಲಾ ಸೌಲಭ್ಯದ ಲಾಭ ನನ್ನ ವಿದ್ಯಾರ್ಥಿಗಳಿಗೆ ಸಿಗಬೇಕು. ಅವರು ಈ ದೇಶದ ಸಂಪತ್ತು ಆಗಿ ದೇಶವನ್ನು ಮುನ್ನಡೆಸಿದಾಗ ದೇಶ ಮೊದಲು ಎಂಬ ವಿಷಯಕ್ಕೆ ಮಹತ್ವ ಬರುತ್ತದೆ ಎಂದು ಹೇಳಿ ಶಿಕ್ಷಕರ ದಿನಾಚರಣೆಗೆ ಶುಭ ಹಾರೈಸಿದರು.
ವಿದ್ಯಾಭಾರತಿ ವತಿಯಿಂದ ತೆಲಂಗಾಣದಲ್ಲಿ ನಡೆದ ಕ್ಷೇತ್ರಿಯ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸಿದ ಪ್ರಥಮ ಸ್ಥಾನ ಪಡೆದ ಶಕ್ತಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾದ ಸಮರ್ಥ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ HDFC ಬ್ಯಾಂಕ್ ಕಾರ್ಕಳದ ವ್ಯವಸ್ಥಾಪಕರಾದ ಪ್ರಸಾದ್ ಪ್ರಭು ಉಪಸ್ಥಿತರಿದ್ದರು. ಶಾಲಾ ಪ್ರಾಂಶುಪಾಲೆ ಸುರೇಖಾ ಆರ್ ಭಟ್ ಸ್ವಾಗತಿಸಿದರು. ಉಪನ್ಯಾಸಕ ಸುನಿಲ್ರವರು ಸನ್ಮಾನ ಪತ್ರವನ್ನು ವಾಚಿಸಿದರು. ಶಿಕ್ಷಕಿ ಸುಮಿತ್ರಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.










